1931 ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಪರೀಕ್ಷೆಯಲ್ಲಿ ವಡ್ಡಾರಾಧನೆಯ ಮೂರು ಕತೆಗಳನ್ನು ಡಿ.ಎಲ್. ನರಸಿಂಹಾಚಾರ್ ಸಂಪಾದಿಸಿ ಪ್ರಕಟಿಸುವುದರ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ವಡ್ಡಾರಾಧನೆಯನ್ನು ಪರಿಚಯಿಸಿದರು. ನಂತರ 1949 ರಲ್ಲಿ ವಿಸ್ತಾರವಾದ ಪೀಠಿಕೆ, ಟಿಪ್ಪಣಿ ಸಹಿತ ಅವರೇ ಹತ್ತೊಂಬತ್ತು ಕತೆಗಳನ್ನು ಸಂಪಾದಿಸಿ ಶಿವಕೋಟ್ಯಾಚಾರ‌್ಯ ವಿರಚಿತ ವಡ್ಡಾರಾಧನೆ ಗ್ರಂಥ ಪ್ರಕಟಿಸಿದರು.
ಆ ವೇಳೆಗೆ ಆ.ನೆ. ಉಪಾಧ್ಯ ಕೃತಿಯ ಹೆಸರು ಮತ್ತು ಕರ್ತೃವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದರು. 1970ರ ವೇಳೆಗೆ ಎಂ.ಎಂ. ಕಲಬುರ್ಗಿಯವರು ವಡ್ಡಾರಾಧನೆ ಎಂಬುದು ಕೃತಿಯ ಹೆಸರಲ್ಲ, ಶಿವಕೋಟ್ಯಾಚಾರ‌್ಯನೆಂಬುದು ಕರ್ತೃವಿನ ಹೆಸರ್ಲ್ಲಲ ಎಂದು ಪ್ರತಿಪಾದಿಸಿ ಇದರ ಹೆಸರು `ಆರಾಧನಾ ಕರ್ನಾಟ ಟೀಕಾ' ಎಂದೂ, ಇದನ್ನು ರಚಿಸಿದವನು ಬ್ರಾಜಿಷ್ಣು ಎಂದೂ ಪ್ರತಿಪಾದಿಸಿದರು. ಮುಂದೆ ಹಂಪ ನಾಗರಾಜಯ್ಯನವರು ಇದನ್ನು ಅನುಮೋದಿಸುತ್ತ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗಕ್ಕೆ ಸಂಪಾದಿಸಿ ಪ್ರಕಟಿಸುವಾಗ ರೂಢಿಯ ಜನಪ್ರಿಯ ಹೆಸರನ್ನು ಬಿಡಲಾಗದೆ ಕೃತಿಯ ಹೆಸರನ್ನು `ವಡ್ಡಾರಾಧನೆ' ಎಂದೇ ಕರೆದು ಕರ್ತೃ ಬ್ರಾಜಿಷ್ಣು ಎಂದು ಹೇಳುತ್ತಾರೆ. ಈಗ 2012 ರಲ್ಲಿ ಪ್ರಾಚೀನ ಗದ್ಯಸಾಹಿತ್ಯ ಮಾಲೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸುವಾಗ ಬ್ರಾಜಿಷ್ಣು ವಿರಚಿತ `ಆರಾಧನಾ ಕರ್ನಾಟ ಟೀಕಾ' (ಸಂ. ಶಾಂತಿನಾಥ ದಿಬ್ಬದ) ಎಂದೇ ಪ್ರಕಟಿಸಲಾಗಿದೆ.