ಎರಡೇ ದೃಶ್ಯವಿರುವ ಚಿಕ್ಕ ನಾಟಕ "ಜಲಗಾರ". ಗಾತ್ರದಲ್ಲಿ ಚಿಕ್ಕದ್ದೇ ಆದರೂ ಸತ್ವದಲ್ಲಿ ಹಿರಿದಾಗಿರುವ ಈ ನಾಟಕ ಪ್ರತಿ ಸಾಲಿನಲ್ಲೂ ಜಲಗಾರನ ಪೊರಕೆಯಿಂದ ಕಾವ್ಯರಸವನ್ನು ಚೆಲ್ಲುತ್ತ ಹೋಗುತ್ತದೆ.
ಕುವೆಂಪುರವರು 1928 ರಲ್ಲಿ ತಮ್ಮ ಉನ್ನತ ಶಿಕ್ಷಣದ ಸಮಯದಲ್ಲಿ ಬರೆದಿದ್ದಾರೂ ಪ್ರಕಟಗೊಂಡದ್ದು 1931ರಲ್ಲಿ, ಅಂದರೆ ಅಸ್ಪುರ್ಶ್ವತೆ ಎಂಬ ಸಾಮಾಜಿಕ ಪಿಡುಗು ಕ್ರೂರ ರೂಪದಲ್ಲಿ ಇದ್ದ ಸಮಯದಲ್ಲಿ.. ಈ ಪಿಡುಗನ್ನು ವಿಭಿನ್ನ ರೀತಿಯಲ್ಲಿ ಕಂಡ ಪುಟ್ಟಪ್ಪನವರು ನಾಟಕದ ಮೂಲಕ ತಮ್ಮ ಆಲೋಚನೆ ಹಾಗೂ ಧೋರಣೆಗಳನ್ನು ನಿರೂಪಿಸಿದ್ದಾರೆ.
ಎರಡನೇ ದೃಶ್ಯ ಅತ್ಯಾಮೋಘವಾಗಿ ಮೂಡಿ ಬಂದಿದೆ.... ಡಾಂಬಿಕ ಭಕ್ತಿಯನ್ನು ತೊರೆದು, ಕಾಯಕವೇ ಕೈಲಾಸವೆಂದು ನಂಬುವ ಜಲಗಾರನಿಗೆ, ಶಿವ ಜಲಗಾರನಾಗೇ ಪ್ರತ್ಯಕ್ಷನಾಗಿ "ನಾನೊಬ್ಬ ಜಲಗಾರ, ಅಂಜದಿರು ಸೋದರನೆ ಜಗದ ಜಲಗಾರ ನಾನು, ಶಿವನೆಂದು ಕರೆಯುವರು ಎನ್ನ" ಎಂದು ಕರೆದು "ಬಾ ಎನ್ನ ಸೋದರನೇ, ನೀನೆನ್ನ ನಿಜಭಕ್ತ,! ನಿನ್ನದೇ ಶಿವಭಕ್ತಿ, ನೀನೇ ಶಿವಭಕ್ತ, ನೀನೇ ನಾನಾಗಿಹೆನು, ನಾನೆ ನೀನಾಗಿರುವೆ, ಶಿವ ನೀನು, ಶಿವ ನೀನು" ಎಂದೇಳಿ ಶಿವ ಮೌಢ್ಯವನ್ನಳಿಸುತ್ತಾನೆ.