Showing posts with label ಪ್ರಸ್ತುತ ವರ್ತಮಾನ. Show all posts
Showing posts with label ಪ್ರಸ್ತುತ ವರ್ತಮಾನ. Show all posts

Friday, 26 January 2024

ಗಣರಾಜ್ಯೋತ್ಸದ ಇತಿಹಾಸ ಮತ್ತು ಮಹತ್ವ

 





Republic Day: 75ನೇ ಗಣರಾಜ್ಯೋತ್ಸವ ಸಂಭ್ರಮ; ಭಾರತದ ಸಂವಿಧಾನದ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳಿವು

Republic Day 2024: ಇದೇ ಜನವರಿ 26 ರಂದು ಭಾರತವು 75ನೇ ವರ್ಷದ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದೆ. ಭಾರತದ ಸಂವಿಧಾನದ ಬಗ್ಗೆ ಅದರ ಮಹತ್ವದ ಬಗ್ಗೆ ನಿಮಗೆ ತಿಳಿದಿದೆ. ಆದರೆ ಸಂವಿಧಾನ ರಚನೆಯ ಸಂಬಂಧ ನಿಮಗೆ ತಿಳಿದಿರದ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ.

ಈ ಬಾರಿ ಭಾರತವು 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಪ್ರತಿ ವರ್ಷದಂತೆ ಈ ವರ್ಷವು ಭಾರತವು ಗಣರಾಜ್ಯೋತ್ಸವ ದಿನದಂದು ವಿಶೇಷ ಅತಿಥಿಯನ್ನು ಭಾರತಕ್ಕೆ ಕರೆಸುತ್ತಿದೆ. ಈ ಬಾರಿ ಭಾರತದ ಗಣತಂತ್ರ ದಿನಕ್ಕೆ ವಿಶೇಷ ಅತಿಥಿಯಾಗಿ ಫ್ರಾನ್ಸ್​ ಅಧ್ಯಕ್ಷ ಇಮಾನ್ಯುವಲ್​ ಮ್ಯಾಕ್ರನ್​ ಆಗಮಿಸುತ್ತಿದ್ದಾರೆ. ಅಲ್ಲದೇ ಭಾರತದಲ್ಲಿ ಗಣರಾಜ್ಯೋತ್ಸವ ದಿನದಂದು ಫ್ರಾನ್ಸ್​​ನಿಂದ ಆಗಮಿಸುತ್ತಿರುವ ಆರನೇ ಅಧ್ಯಕ್ಷ ಎಂಬ ಕೀರ್ತಿಗೆ ಇಮ್ಯಾನುವಲ್​ ಮ್ಯಾಕ್ರನ್​ ಪಾತ್ರರಾಗಿದ್ದಾರೆ. ಭಾರತದ 75ನೇ ಗಣರಾಜ್ಯೋತ್ಸವ ದಿನಕ್ಕೆ ವಿಶೇಷ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಜೊ ಬಿಡೈನ್​​ಗೆ ಆಹ್ವಾನ ನೀಡಲಾಗಿತ್ತು. ಆದರೆ ಜೊ ಬಿಡೈನ್​ರಿಗೆ ಈ ಸಮಯದಲ್ಲಿ ಭಾರತದ ಪ್ರವಾಸ ಸಾಧ್ಯವಿಲ್ಲದ ಕಾರಣ ಫ್ರಾನ್ಸ್​ ಅಧ್ಯಕ್ಷರಿಗೆ ಆಹ್ವಾನ ನೀಡಲಾಗಿದೆ .

ಗಣರಾಜ್ಯೋತ್ಸದ ಇತಿಹಾಸ ಮತ್ತು ಮಹತ್ವ:

ಗಣರಾಜ್ಯೋತ್ಸವವು ಜನವರಿ 26, 1950 ರಂದು ಭಾರತದ ಸಂವಿಧಾನದ ಅಂಗೀಕಾರವನ್ನು ನೆನಪಿಸುತ್ತದೆ. ಭಾರತವು 1947 ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆದ ನಂತರ ಅಂದರೆ ಜನವರಿ 26, 1950ರಲ್ಲಿ ಸಂವಿಧಾನವನ್ನು ಜಾರಿಗೆ ತಂದಿತು.

ಅಂದಿನಿಂದ ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವ ಅಂದರೆ ಸಾರ್ವಭೌಮ ದೇಶವಾಯಿತು. ಈ ಈ ಸುಸಂದರ್ಭವನ್ನು ಗಣರಾಜ್ಯ ಎಂದು ಘೋಷಿಸಿ ಅಂದಿನಿಂದ ಜನವರಿ 26 ಅನ್ನು ರಿಪಬ್ಲಿಕ್‌ ಡೇ ಎನ್ನುವುದಾಗಿ ಆಚರಿಸಲಾಗುತ್ತದೆ.

ಸಂವಿಧಾನ ಸಭೆಯು ತನ್ನ ಮೊದಲ ಅಧಿವೇಶನವನ್ನು ಡಿಸೆಂಬರ್ 9, 1946 ರಂದು ಮತ್ತು ಕೊನೆಯ ಅಧಿವೇಶನವನ್ನು ನವೆಂಬರ್ 26, 1949 ರಂದು ನಡೆಸಿತು. ಆಮೇಲೆ ಒಂದು ವರ್ಷದ ನಂತರ ಸಂವಿಧಾನವನ್ನು ಅಂಗೀಕರಿಸಲಾಯಿತು. ಡಾ ಬಿಆರ್ ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿಯ ನೇತೃತ್ವ ವಹಿಸಿದ್ದರು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ ಆರ್​ ಅಂಬೇಡ್ಕರ್​ರ ಸವಿನೆನಪಿಗಾಗಿ ಭಾರತವು ಪ್ರತಿ ವರ್ಷ ನವೆಂಬರ್​ 26ರಂದು ಸಂವಿಧಾನ ದಿನವನ್ನು ಆಚರಿಸುತ್ತದೆ.

ಜನವರಿ 26ರಂದೇ ಆಚರಣೆ ಏಕೆ ?

1929 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ, ಪೂರ್ಣ ಸ್ವರಾಜ್ ಘೋಷಣೆ ಅಥವಾ “ಭಾರತದ ಸ್ವಾತಂತ್ರ್ಯದ ಘೋಷಣೆ” ಯನ್ನು ಘೋಷಿಸಲಾಯಿತು, ಮತ್ತು 26 ಜನವರಿಯನ್ನು 1930 ರಲ್ಲಿ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಯಿತು. ಆದರೆ ಈ ಹೆಬ್ಬಯಕೆ 1947ರ ವರೆಗೂ ಈಡೇರಲಿಲ್ಲ. ನಂತರ ಸ್ವಾತಂತ್ರ್ಯ ಸಿಕ್ಕು ಸಂವಿಧಾನ ಜಾರಿ ಮಾಡುವ ಸಮಯದಲ್ಲಿ ಹಳೆಯ ನಿರ್ಣಯದಂತೆ ಜನವರಿ 26 ಅನ್ನು ಆಯ್ಕೆ ಮಾಡಿಕೊಂಡು ಸಂವಿಧಾನವನ್ನು ಜಾರಿಗೊಳಿಸಲಾಯಿತು. ಅಂದಿನಿಂದ ದೇಶ ಗಣರಾಜ್ಯವಾಗಿ ಹೊರಹೊಮ್ಮಿತು.

ಗಣರಾಜ್ಯೋತ್ಸವ

ಆಚರಣೆಗಳು

ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು, ಅಧ್ಯಕ್ಷರು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ನಂತರ ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುತ್ತಾರೆ. ಹಾಗೆಯೇ ಭಾರತದ ರಾಷ್ಟ್ರಪತಿಗಳು ದೇಶದ ಅರ್ಹ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ವಿತರಿಸುತ್ತಾರೆ ಮತ್ತು ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರವನ್ನು ನೀಡಲಾಗುತ್ತದೆ.

ಮೆರವಣಿಗೆ ಸಮಯ ಮತ್ತು ಥೀಮ್:

ಗಣರಾಜ್ಯೋತ್ಸವ 2024ರ ಪರೇಡ್ ಥೀಮ್ ‘ವಿಕ್ಷಿತ್ ಭಾರತ್’ ಮತ್ತು ‘ಭಾರತ್ - ಲೋಕತಂತ್ರ ಕಿ ಮಾತೃಕಾ’, ಇದು ಪ್ರಜಾಪ್ರಭುತ್ವದ ಪೋಷಕರಾಗಿ ಭಾರತದ ಪಾತ್ರವನ್ನು ಒತ್ತಿಹೇಳುತ್ತದೆ ಮತ್ತು ಜನವರಿ 26 ರಂದು ಶುಕ್ರವಾರ ಬೆಳಿಗ್ಗೆ 10:30 ಕ್ಕೆ ನವದೆಹಲಿಯ ಕರ್ತವ್ಯ ಪಥ್‌ನಲ್ಲಿ ಪ್ರಾರಂಭವಾಗಲಿದೆ. ಮೆರವಣಿಗೆಯಲ್ಲಿ 95-ಸದಸ್ಯ ಮೆರವಣಿಗೆಯ ತುಕಡಿ ಮತ್ತು 33-ಸದಸ್ಯ ಬ್ಯಾಂಡ್ ತುಕಡಿ ಕೂಡ ಇರುತ್ತದೆ.

ಇದು ಸುಮಾರು 90 ನಿಮಿಷಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಸ್ಥಳವು 77,000 ಆಸನ ಸಾಮರ್ಥ್ಯವನ್ನು ಹೊಂದಿದ್ದು, 42,000 ಆಸನಗಳನ್ನು ಸಾರ್ವಜನಿಕರಿಗೆ ಕಾಯ್ದಿರಿಸಲಾಗಿದೆ.

ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಚಾರಗಳು

ಭಾರತವು ಈ ಬಾರಿ 75ನೇ ಗಣತಂತ್ರ ದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ರಚನೆಯ ಸಂಬಂಧ ಕೆಲವು ವಿಶೇಷವಾದ ಘಟನೆಗಳ ಬಗ್ಗೆ ತಿಳಿದುಕೊಳ್ಳೋಣ . ಭಾರತದ ಸಂವಿಧಾನವನ್ನು 1949ರ ನವೆಂಬರ್​ 26ರಂದು ಅಂಗೀಕರಿಸಲಾಗಿತ್ತು. ಹೀಗಾಗಿ ಸಂವಿಧಾನ ಶಿಲ್ಪಿ ಡಾ.ಬಿ ಆರ್​ ಅಂಬೇಡ್ಕರ್​ರ ಸವಿನೆನಪಿಗಾಗಿ ಭಾರತವು ಪ್ರತಿ ವರ್ಷ ನವೆಂಬರ್​ 26ರಂದು ಸಂವಿಧಾನ ದಿನವನ್ನು ಆಚರಿಸುತ್ತದೆ. ಭಾರತದ ಸಂವಿಧಾನವು ವಿಶ್ವದ ಅತೀ ದೊಡ್ಡ ಸಂವಿಧಾನವಾಗಿದೆ. ಈ ಸಂವಿಧಾನವನ್ನು ಡಾ. ಬಿಆರ್​ ಅಂಬೇಡ್ಕರ್​ ಅವರು ಬ್ರಿಟನ್​, ಜರ್ಮನಿ, ಕೆನಡಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಅನೇಕ ದೇಶಗಳ ಸಂವಿಧಾನಗಳಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ.

ಇನ್ನೊಂದು ಗಮನಿಸಬೇಕಾದ ವಿಚಾರ ಏನೆಂದರೆ ಭಾರತೀಯ ಸಂವಿಧಾನವನ್ನು ಸಂಪೂರ್ಣ ಕೈ ಬರಹದಲ್ಲಿಯೇ ಬರೆಯಲಾಗಿದೆ. ಪಾರ್ಲಿಮೆಂಟ್​ನ ಲೈಬ್ರರಿಯಲ್ಲಿ ಇಂದಿಗೂ ಭಾರತದ ಕೈ ಬರಹದ ಸಂವಿಧಾನದ ಪ್ರತಿಯನ್ನು ಸಂರಕ್ಷಿಸಿ ಇಡಲಾಗಿದೆ. ಇದು ಕೈ ಬರಹದಲ್ಲಿ ಬರೆಯಲಾದ ವಿಶ್ವದ ಅತೀ ದೊಡ್ಡ ಸಂವಿಧಾನ ಕೂಡ ಹೌದು. 2 ವರ್ಷಗಳ ಸಮಯಾವಕಾಶ ತೆಗೆದುಕೊಂಡು ಭಾರತದ ಸಂವಿಧಾನ ರಚಿಸಲಾಗಿದೆ. ನಿಖರವಾಗಿ ಹೇಳಬೇಕು ಎಂದರೆ ಸರಿಯಾಗಿ 11 ತಿಂಗಳು 18 ದಿನಗಳ ಸಮಯಾವಕಾಶವನ್ನು ತೆಗೆದುಕೊಂಡು ಭಾರತದ ಸಂವಿಧಾನವನ್ನು ಬರೆಯಲಾಗಿದೆ. ಸಂವಿಧಾನದ ಮೂಲ ಪ್ರತಿಯನ್ನು ಹಿಂದಿ ಹಾಗೂ ಇಂಗ್ಲೀಷ್​ ಭಾಷೆಯಲ್ಲಿ ಕೈ ಬರಹದಲ್ಲಿ ಬರೆಯಲಾಗಿದೆ.

ಸಂವಿಧಾನವನ್ನು ಕೈ ಬರಹದಲ್ಲಿ ಬರೆದಿದ್ದ ನಾರಾಯಣ ರಾಯ್ಝಾದಾ

ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ಡಾ. ಬಿಆರ್​ ಅಂಬೇಡ್ಕರ್​ . ಇದೇ ಕಾರಣಕ್ಕೆ ಅಂಬೇಡ್ಕರ್​ರಿಗೆ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೂ ನೀಡಲಾಗಿದೆ. ಆದರೆ ಸಂವಿಧಾನವನ್ನು ಪ್ರೇಮ್​ ಬಿಹಾರಿ ನಾರಾಯಣ ರಾಯ್ಝಾದಾ ಎಂಬವರು ಕೈ ಬರಹದಲ್ಲಿ ಬರೆದಿದ್ದರು.

ಆರು ತಿಂಗಳ ಅವಧಿಯನ್ನು ಪಡೆದುಕೊಂಡು ಕೈ ಬರಹದಲ್ಲಿ ಬರೆದಿದ್ದಾರೆ. ಅದನ್ನು ಬರೆಯಲು ಪ್ರೇಮ್​ ಬಿಹಾರಿ ನಾರಾಯಣ ರಾಯ್ಝಾದಾ ಅವರು 433 ಪೆನ್​ ನಿಬ್​ಗಳನ್ನು ಬಳಕೆ ಮಾಡಿದ್ದರಂತೆ..! ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ ಡಾ. ಬಿ ಆರ್​ ಅಂಬೇಡ್ಕರ್​ನ್ನು ಭಾರತ ಇಂದಿಗೂ ಆರಾಧಿಸುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್​ರ ಮಾರ್ಗದರ್ಶನದಲ್ಲಿ ರೂಪುಗೊಂಡ ಭಾರತದ ಈ ಸಂವಿಧಾನ ಇಂದಿಗೂ ಭಾರತಕ್ಕೆ ಆದರ್ಶಪ್ರಾಯವಾಗಿದೆ.



Friday, 29 December 2023

ರಾಷ್ಟ್ರಕವಿ ಕುವೆಂಪು ವಿಶ್ವ ಮಾನವ ಸಂದೇಶ – ಪಂಚಮಂತ್ರ – ಸಪ್ತ ಸೂತ್ರ

 ಇಂದು (ಡಿ.29) ‘ದಾರ್ಶನಿಕ ಕವಿ’ ಕುವೆಂಪು (ಕೆ.ವಿ. ಪುಟ್ಟಪ್ಪ) ಜನ್ಮದಿನ. ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣ್ಕೆಯನ್ನೂ ವೈಚಾರಿಕತೆಯನ್ನೂ ಬಿತ್ತಿದ ಮಹಾಚೇತನ ಕುವೆಂಪು ಅಪ್ಪಟ ಅಧ್ಯಾತ್ಮ ಜೀವಿಯಾಗಿದ್ದರು. ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…

ಅವರು ರೂಪಿಸಿದ ‘ವಿಶ್ವಮಾನವ ಸಂದೇಶ ‘ ಇಲ್ಲಿ ನೀಡಲಾಗಿದೆ…


“ಮರ್ತ್ಯಜೀವನದ ತಾಟಸ್ಥ್ಯಮಂ ಕಡೆಕಡೆದು
ಶ್ರದ್ಧೆ ಸಂದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷಗಳಂ
ಕೆರಳಿಸುವ ಶತಶತ ಮತಂಗಳಂ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕಂಗಳೋಲ್,
ಜೋಲ್ವ ಜಿಹ್ವೆಯೊಳತಿ ಭಯಾನಕಂ-!”
ಅಭಿಷೇಕ ವಿರಾಡ್ ದರ್ಶನಂ – ೧೪೭-೧೫೨ | ಶ್ರೀರಾಮಾಯಣದರ್ಶನಂ, ಶ್ರೀ ಸಂಪುಟ. ಸಂ.೧೩

kuvempu

ವಿಶ್ವಮಾನವ ಸಂದೇಶ

ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.

ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ!

ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ!

ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’

ಪಂಚಮಂತ್ರ

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ – ಈ ಪ೦ಚಮ೦ತ್ರ ಇನ್ನು ಮು೦ದಿನ ದೃಷ್ಟಿಯಾಗಬೇಕಾಗಿದೆ. ಅ೦ದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆ೦ಶಿಕ ದೃಷ್ಟಿಯಿ೦ದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅ೦ತಹ ಭಾವನೆ ಅ೦ತಹ ದೃಷ್ಟಿ ಬರಿಯ ಯಾವುದೋ ಒ೦ದು ಜಾತಿಗೆ, ಮತಕ್ಕೆ, ಗು೦ಪಿಗೆ, ಒ೦ದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗು೦ಪುಗಾರಿಕೆಗೆ೦ದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿಸ್ವಾತ೦ತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸ೦ಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾದಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.

ಸಪ್ತಸೂತ್ರ

  1. “ಮನುಷ್ಯಜಾತಿ ತಾನೊ೦ದೆ ವಲ೦” ಎ೦ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
  2. ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸ೦ಪೂರ್ಣವಾಗಿ ತೊಲಗಿಸಬೇಕು. ಅ೦ದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ, ಅ೦ತ್ಯಜ, ಷಿಯಾ, ಸುನ್ನಿ, ಕ್ಯಾಥೊಲಿಕ್, ಪ್ರಾಟಿಸ್ಟ೦ಟ್, ಸಿಕ್, ನಿರ೦ಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
  3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ದತಿಯನ್ನು ಸ೦ಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
  4. ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
  5. ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
  6. ಮತ ಗು೦ಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒ೦ದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕ೦ಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅ೦ದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸ೦ಖ್ಯೆಯ ಮತಗಳಿರುವ೦ತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗು೦ಪುಕಟ್ಟಿ ಜಗಳ ಹಚ್ಚುವ೦ತಾಗಬಾರದು.
  7. ಯಾವ ಒ೦ದು ಗ್ರ೦ಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರ೦ಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ‘ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು.







Thursday, 2 July 2020

ಒಡವೆ ಖರೀದಿದಾರರಿಗೆ ಬಂಪರ್‌ ನ್ಯೂಸ್ : ಚಿನ್ನ 575 ರೂ. - ಬೆಳ್ಳಿ ಬರೋಬರಿ 1075 ರೂಪಾಯಿ ಕಡಿಮೆಯಾಗಿದೆ.!

ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ದೇಶದ ಜನಿವಾರ ಪೇಟೆಗಳಲ್ಲಿ 10 ಗ್ರಾಂ ಚಿನ್ನದ ದರ 575 ರೂ., ಬೆಳ್ಳಿ ಕೆಜಿಗೆ 1075 ರೂಪಾಯಿ ಕಡಿಮೆಯಾಗಿದೆ.
ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 488 ರೂಪಾಯಿ ಕಡಿಮೆಯಾಗಿ 49,135 ರೂ.ಗೆ ಮಾರಾಟವಾಗಿದೆ. ಬೆಳ್ಳಿ ಬೆಲೆ ಕೆಜಿಗೆ 1168 ರೂಪಾಯಿ ಕಡಿಮೆಯಾಗಿದ್ದು 50,326 ರೂ.ಗೆ ಮಾರಾಟವಾಗಿದೆ.
ಅದೇ ರೀತಿ ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನ ದರ 575 ರೂ. ಕಡಿಮೆಯಾಗಿ 48,115 ರೂ.ಗೆ ಮಾರಾಟವಾಗಿದ್ದು, ಬೆಳ್ಳಿ ಬೆಲೆ ಕೆಜಿಗೆ 1075 ರೂ. ಇಳಿಕೆಯಾಗಿ 48,580 ರೂಪಾಯಿಗೆ ಮಾರಾಟವಾಗಿದೆ.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...